ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಹಕ್ಕು ಸ್ವಾಮ್ಯವೆಂಬ ಭೂತ

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ನವ೦ಬರ್ 20 , 2015

ನಮ್ಮಿಂದ ಅಪರಿಹಾರ್ಯವಾದ ದುರಿತಗಳು ಎದುರಾದಾಗ ಭಗವಂತನಿಗೆ ಶರಣಾಗುವುದು ಸ್ವಾಭಾವಿಕ. ಈ ದುರಿತ ಪರಿಹಾರಕ್ಕಾಗಿ ಮಂತ್ರ ಅಥವಾ ಶ್ಲೋಕ ಪಾರಾಯಣವನ್ನು ಮಾಡುತ್ತೇವೆ. ಇದೊಂದು ಆತ್ಮ ತೃಪ್ತಿ. ಇದರಿಂದ ಬಸವಳಿದ ಜೀವನದಲ್ಲಿ ಕಿಂಚಿತ್ತಾದರೂ ಆತ್ಮವಿಶ್ವಾಸ ಗಳಿಸುವ ನಂಬಿಕೆ. ಹೀಗೆ ಮಂತ್ರ ಜಪವನ್ನು ಮಾಡುವಾಗ ಪ್ರತೀ ಮಂತ್ರಕ್ಕೆ ಒಂದು ಋಷಿ ಛಂದಸ್ಸು ಎಂಬುದಿದೆ. ಅದನ್ನು ಕಡ್ಡಾಯವಾಗಿ ಪಠಿಸಲೇ ಬೇಕು. ಇಲ್ಲವಾದರೆ ನಾವು ಗೈಯ್ಯುವ ಕರ್ಮದ ಸತ್ಫಲ ಸಿಗದೇ ಉದ್ದೇಶ ಸಿದ್ಧಿಯಾಗುವುದಿಲ್ಲ. ಗುರು ಮುಖೇನ ಮಂತ್ರೋಪದೇಶವಾದಲ್ಲಿ ಈ ಛಂದಸ್ಸಿನ ಬಗ್ಗೆ ತಿಳಿಯುವುದು ಸಾಧ್ಯವಾಗುತ್ತದೆ. ಏನು ಈ ಛಂದಸ್ಸು?

ಯಾವುದೇ ಮಂತ್ರಕ್ಕೂ ದೃಷ್ಠಾರನಾಗಿ ಋಷಿ ಇರುತ್ತಾನೆ. ದೃಷ್ಠಾರ ಆ ಮಂತ್ರವನ್ನು ಪ್ರತ್ಯಕ್ಷೀಕರಿಸಿಕೊಂಡವನು. ವಿಶ್ವಾಮಿತ್ರ ಗಾಯತ್ರಿಮಂತ್ರವನ್ನು ಪ್ರತ್ಯಕ್ಷೀಕರಿಸಿಕೊಂಡಹಾಗೆ, ಆದರೆ ದೃಷ್ಠಾರ ಎಂದರೆ ಸೃಷ್ಟಿಕರ್ತನಲ್ಲ. ಕೇವಲ ಕಂಡುಕೊಂಡವನು ಎಂದರ್ಥ. ಮಂತ್ರಗಳು ಯಾರದೇ ಕೃತಿಯೂ ಅಲ್ಲ ಸೃಷ್ಟಿಯೂ ಅಲ್ಲ. ಹಾಗಾಗಿ ಆ ಮಂತ್ರಗಳನ್ನು ಪಠಿಸುವ ಮೊದಲು ಮಂತ್ರದ ದೃಷ್ಟಾರನನ್ನು ಸ್ಮರಿಸುವುದೇ ಮಂತ್ರದ ಛಂದಸ್ಸು ಎಂದು ಹೇಳುವುದು. ಇದನ್ನು ಪ್ರತೀ ಮಂತ್ರದ ಆರಂಭದಲ್ಲಿ ಪಠಿಸಿ, ಮಂತ್ರದ ದೃಷ್ಠಾರರಾದಂತಹ ಋಷಿಗಳನ್ನು ಸ್ಮರಿಸುವುದು ಅವಶ್ಯ. ಇದೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಇದ್ದ ಹಾಗೆ. ಸನಾತನ ಧರ್ಮಾವಲಂಬಿಗಳಾಗಿ ಇದನ್ನು ಅನುಸರಿಸಿಕೊಂಡು ಬಂದಿರುವಲ್ಲಿ ನಮ್ಮ ಸಂಸ್ಕಾರ ಸಾಕ್ಷಿಯಾಗುತ್ತದೆ. ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿಕೊಂಡವನು ಇದಕ್ಕೆ ಬದ್ಧನಾಗಿ ಆತ್ಮ ವಂಚನೆ ಗೈಯದೆ ನಡೆದುಕೊಂಡಲ್ಲಿ ಅನುಸರಿಸಿದ ಕರ್ಮಾನುಷ್ಠಾನದಲ್ಲಿ ಇಷ್ಟಾರ್ಥ ನೆರವೇರುತ್ತದೆ ಎಂಬುದು ನಂಬಿಕೆ. ಪಠಿಸಿದ ಮಂತ್ರ ಜಪದಿಂದ ದುರಿತ ಪರಿಹಾರದ ಸಾಧನೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೋ ಅಥವಾ ಆ ಮಾರ್ಗದಲ್ಲಿ ನಾವು ಗಮ್ಯವನ್ನು ಸೇರುತ್ತೇವೋ ಇಲ್ಲವೋ ಅದು ಬೇರೆ, ಆದರೆ ನಾವು ಗಮಿಸಿದಂತಹ ದಾರಿ ಎಷ್ಟು ಪರಿಶುದ್ದ ಎಂಬುದು ಆತ್ಮ ತೃಪ್ತಿಯ ಪ್ರಶ್ನೆಯಾಗಿಬಿಡುತ್ತದೆ. ದೃಷ್ಟಾರನಾದಂತಹ ಋಷಿಯನ್ನು ಸ್ಮರಿಸುವುದರಿಂದ ಆ ಮಟ್ಟಿಗೆ ನಾವು ಪೂರ್ಣ ಶುಭ್ರತೆಯನ್ನು ಹೊಂದಿ ನಮ್ಮ ಹಾದಿಯೂ ಪರಿಶುದ್ದತೆಯಿಂದ ಕೂಡಿರುತ್ತದೆ. ನಾವು ಪ್ರಾಮಾಣಿಕರು ಎಂಬ ಅತ್ಮತೃಪ್ತಿ ಇದ್ದಾಗ ಗಳಿಸಿದ ಸಿದ್ಧಿಯಲ್ಲಿ ಪರಿಪೂರ್ಣತೆ ಇರುತ್ತದೆ. ಇಲ್ಲವಾದರೆ ಪರರಿಂದ ಅಪಹರಿಸಿದ ವಸ್ತುವಿನಂತೆ ಅದು ಆತ್ಮ ವಂಚನೆಯನ್ನು ತೋರಿಸುತ್ತಾ ಇರುತ್ತದೆ. ಅನಾದಿ ಕಾಲಾದಿಂದಲೇ ಹಕ್ಕುಸ್ವಾಮ್ಯ ಎಂಬುದು ನಮ್ಮ ಸಂಸ್ಕಾರದಲ್ಲಿ ಮಿಳಿತವಾಗಿದೆ ಎಂಬುದಕ್ಕೆ ಇದು ದೃಷ್ಟಾಂತ. ನಮಾ ಸನಾತನ ಧರ್ಮ ಸಂಸ್ಕಾರಗಳು ಇದಕ್ಕೆ ಪುರಾವೆಯನ್ನು ಒದಗಿಸುತ್ತಿವೆ. ಅನಾದಿ ಕಾಲದಿಂದಲೇ ನಾವು ಹಕ್ಕು ಸ್ವಾಮ್ಯ ಅಂದರೆ Copy Right ನ ಬಗ್ಗೆ ಆದರ ಮತ್ತು ಅರಿವಿದ್ದವರು ಎಂದು ಅರ್ಥ. ಇಷ್ಟಾದರೂ ಇಂದು ಹಕ್ಕು ಸ್ವಾಮ್ಯದ ಬಗ್ಗೆ ಹೇಳುವುದು ಅಪರಾಧ ಎಂದು ಪರಿಗಣಿತವಾಗುವುದಿದ್ದರೆ... ನಾವು ಆ ಸಂಸ್ಕಾರದಿಂದ ದೂರವೇ ಇದ್ದೇವೆ ಎಂಬುದಕ್ಕೆ ನಿದರ್ಶನ. ಇಲ್ಲಿ ತಾತ್ಪರ್ಯ ಇಲ್ಲಿ ಸಂಸ್ಕಾರ ಕ್ಕಿಂತಲೂ ಹೆಸರುಗಳಿಸುವುದೇ ಖ್ಯಾತಿಯ ಸ್ವಾರ್ಥವೇ ಮುಖ್ಯವಾಗಿಬಿಡುತ್ತದೆ.

ಹಕ್ಕುಸ್ವಾಮ್ಯ ಏನು ಎಂಬುದನ್ನು ಇತ್ತೀಚೆಗೆ ಸವಿವರವಾಗಿ ಲೇಖನ ಒಂದರಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ - ಹಕ್ಕುಸ್ವಾಮ್ಯ ಅಥವಾ ಕೃತಿಸ್ವಾಮ್ಯ ತಕ್ಕ ಮಟ್ಟಿಗೆ ವಿಶದೀಕರಿಸಿರುವುದನ್ನು ಕಂಡು ಈ ಅನಿಸಿಕೆಗಳು ತುಂಬಿ ಬಂದಿದೆ. ಈಗ ಯಕ್ಷಗಾನದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ವಿಚಾರಗಳಲ್ಲಿ ಇದೂ ಒಂದು. ದಾರಿಬದಿಯ ಜಾಹೀರಾತು ಕರಪತ್ರವನ್ನು ನೋಡಿರಬಹುದು. ಕೈಗೆ ಬಂದಂತೆ ಅದು ಎಲ್ಲೆಂದರಲ್ಲಿ ಎಸೆದುಬಿಡುತ್ತಾರೆ. ಅದರಂತೇ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಯಕ್ಷಗಾನ ಧ್ವನಿತುಣುಕುಗಳು ಅಥವಾ ದೃಶ್ಯಗಳು ಹಲುವು ಸಲ ಮೌಲ್ಯವನ್ನು ಕಳೆದುಕೊಂಡಂತೆ ಭಾಸವಾಗಿದ್ದರೆ ಅದು ಅತಿಶಯವಲ್ಲ. ಆದರೆ ಇಂದು ಬಹಳಷ್ಟು ಹಂಚಿಕೆಗಳು ಮೂಲವನ್ನು ಸ್ಮರಿಸುವಲ್ಲಿ ಅಥವಾ ಅದನ್ನು ಗೌರವಿಸುವಲ್ಲಿ ಪ್ರಾಮಾಣಿಕತೆಯನ್ನು ತಕ್ಕಮಟ್ಟಿಗೆ ಮೆರೆಯುತ್ತಿದೆ ಎನ್ನಬಹುದು.

ಅನಾದಿ ಕಾಲದಿಂದಲೂ ಈ ಬಗ್ಗೆ ಪ್ರಜ್ಞಾವಂತರಾಗಿರುವುದನ್ನು ಕಂಡುಕೊಂಡರೂ ಹಕ್ಕುಸ್ವಾಮ್ಯ ಗಂಟಲಲ್ಲಿ ಇಳಿಯದ ಅಗುಳಾಗಿದ್ದರೆ ಅದಕ್ಕೆ ನಮ್ಮ ಮನೋಭಾವದಲ್ಲಿ ಅಡಗಿದ ಸ್ವಾರ್ಥವೇ ಕಾರಣ. ಹೇಳಿ ಕೇಳೀ ಯಕ್ಷಗಾನದಲ್ಲಿ ಪರಂಪರೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವಾಗ, ಸನಾತನ ಪರಂಪರೆಯೇ ಹಕ್ಕುಸ್ವಾಮ್ಯವನ್ನು ಗೌರವಿಸಿದೆ ಎಂದು ಹೇಳಿದರೆ ಅದು ಪಥ್ಯವಾಗಲಾರದು. ಯಾಕೆಂದರೆ ಅದು ಪರಂಪರೆಯನ್ನು ಪ್ರಶ್ನಿಸುವ ಮನೋಭಾವ.

ಯಾವುದೇ ಒಂದು ವಸ್ತುವನ್ನೋ ವಿಷಯವನ್ನೋ ಪರಭಾರೆ ಮಾಡುವಾಗ, ಅಲ್ಲಿಅದರಲ್ಲಿರುವ ಸ್ವಾಮ್ಯ ಅಥವ ಹಕ್ಕು ಕುಂಠಿತಗೊಳ್ಳುತ್ತದೆ. ಅಂತಹ ವಸ್ತುವನ್ನು ನೀಡುವುದಕ್ಕೆ ನಾವೆಷ್ಟು ಅರ್ಹರು ಎಂಬುದನ್ನು ಮೊದಲು ಪರಿಗಣಿಸಬೇಕು. ಇದು ಸಾರ್ವಜನಿಕ ಸೌಜನ್ಯವನ್ನು ತೋರಿಸುತ್ತದೆ. ಯಾವುದೋ ವಿಶೇಷ ಕಾರ್ಯಕ್ರಮಕ್ಕೆ ನಮ್ಮ ಮನೆಗೆ ನೆರೆಮನೆಯಾತನ ಪಾತ್ರೆಯೋ ಮತ್ತೊಂದೊ ವಸ್ತುವನ್ನು ತಾತ್ಕಾಲಿಕ ಉಪಯೋಗಕ್ಕಾಗಿ ತರುತ್ತೇವೆ. ಆದರೆ ನಮ್ಮ ಹಕ್ಕು ಆ ವಸ್ತುವಿನಲ್ಲಿರುವುದು ಕೇವಲ ತಾತ್ಕಾಲಿಕವಾಗಿ ಮಾತ್ರ. ಆದರೆ ನಮ್ಮಲ್ಲಿಂದ ಇನ್ನೊಬ್ಬನಿಗೆ ಅದನ್ನು ಉಪಯೋಗಕ್ಕೆ ಕೊಡುವಾಗ ನೆರೆಮನೆಯಾತನ ಒಪ್ಪಿಗೆ ಅವಶ್ಯ. ಇಲ್ಲಿ ನಾವು ಅತಿಬುದ್ಧಿವಂತರಂತೆ ಆತನಿಗೆ ಅರಿವಿಲ್ಲದೆ ಉಪಯೋಗಕ್ಕೆ ಕೊಟ್ಟುಬಿಡಬಹುದು. ಆದರೆ ಅದು ಸೌಜನ್ಯತೆ ಎನಿಸಿಕೊಳ್ಳುವುದಿಲ್ಲ.

ಹಿಂದೆ ಒಂದು ಸಲ ಹೆಸರಾಂತ ಗಾಯಕರ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಗಾಯಕ ಕಾರ್ಯಕ್ರಮದ ಆರಂಭದಲ್ಲೇ ರಾಗವೈವಿಧ್ಯಗಳ ಬಗ್ಗೆ ಹೇಳುತ್ತಾ ಇಂದು ಬಹಳಷ್ಟು ಕಲಾವಿದರು ಅಪರೂಪವಾದ ರಾಗಗಳನ್ನು ಸಾರ್ವಜನಿಕವಾಗಿ ಹಾಡುವುದಕ್ಕೆ ಭಯಪಡುವಂತಹ ವಾತಾವರಣವಿದೆ. ಹಾಗಾಗಿ ಕೇವಲ ಕೆಲವೇ ರಾಗಗಳಿಗೆ ಮಾತ್ರವೇ ಸಂಗೀತ ಕಛೇರಿ ಸೀಮಿತವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಅಂದರೆ ಸಭಿಕರು ಪ್ರಾಮಾಣಿಕರಾಗಿಲ್ಲದೇ ಇರುವುದು. ಎಷ್ಟೋ ರಾಗಗಳನ್ನು ಪ್ರಯತ್ನದಿಂದ ಕಷ್ಟಪಟ್ಟು ಅಭ್ಯಾಸಮಾಡಿ ಅವಿರತ ಸಾಧನೆಯಿಂದ ಅದರಲ್ಲಿ ಪಾಂಡಿತ್ಯವನ್ನು ಪಡೆದಿರಬಹುದು. ಆದರೆ ಆತನ ಪಾಂಡಿತ್ಯ ಕೇವಲ ಆತನ ಅಂತರಂಗ ತೃಪ್ತಿಗೆ ಮಾತ್ರವೇ ಸೀಮಿತವಾಗಿಬಿಡುತ್ತದೆ. ಅದರಿಂದ ಸಾರ್ವಜನಿಕವಾಗಿ ಯಾವ ಅನುಭವವೂ ಸಿಗುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಅಪ್ರಾಮಾಣಿಕತೆ.

ಒಬ್ಬ ಗಾಯಕ ಜೀವಿತ ಸಾಧನೆಯ ಒಂದು ರಾಗವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇಟ್ಟ ನೆಂದಾದರೆ ಆತ ಅಮೂಲ್ಯವಾದ ನಿಧಿಯೊಂದನ್ನು ಹರಿಸಿಬಿಟ್ಟು ಕಳೆದುಕೊಂಡು ಬಿಟ್ಟ ಎಂದೇ ಹೇಳಬೇಕು. ಕಾರಣ ಅವನಿಗಿಂತಲೂ ಸುತ್ತಲಿನ ಮಾಧ್ಯಮ ಆತನಿಗೆ ಅರಿವಿಲ್ಲದೇ ಅದರಲ್ಲಿ ತನ್ನ ಸ್ವಾರ್ಥವನ್ನು ಸಾಧಿಸಿಯಾಗಿರುತ್ತದೆ. ಹಾಗಾಗಿ ಕಾರ್ಯಕ್ರಮದ ಆರಂಭದಲ್ಲೇ ಗಾಯಕ ವಿನಮ್ರವಾಗಿ ಅರಿಕೆ ಮಾಡಿಕೊಳ್ಳುತ್ತಾನೆ ದಯವಿಟ್ಟು ಧ್ವನಿಮುದ್ರಿಸಬೇಡಿ. ಮಾತ್ರವಲ್ಲ ಕಾರ್ಯಕ್ರಮದ ಸಂಘಟಕರೂ ಸಭಿಕರಲ್ಲಿ ಹದ್ದಿನ ಕಣ್ಣಿಟ್ಟು ನೋಡುತ್ತಾರೆ . ಯಾರಾದರೂ ಮುದ್ರಿಸಿಕೊಳ್ಳುತ್ತಿದ್ದಾರೋ ಎಂದು. ಯಾಕೆಂದರೆ ಅಲ್ಲಿ ಹಾಡಿದ ಹಾಡು ಅಥವಾ ಪ್ರದರ್ಶಿತವಾದ ಸಂಗೀತ ಸೃಷ್ಟಿ ಮತ್ತೋಂದು ಕಡೆಯಲ್ಲಿ ಸಿ. ಡಿ. ರೂಪದಲ್ಲಿ ಹೊರಬಂದು ಮನುಷ್ಯನ ಹಣದ ತೆವಲಿಗೆ ಸಾಕ್ಷಿಯಾಗುತ್ತದೆ. ಇಲ್ಲಿ ಸಂಗೀತಗಾರ ಕಲಾವಿದ ಇಂಗು ತಿಂದ ಮಂಗನಂತಾಗುವುದು ಮಾತ್ರವಲ್ಲ ಸಂಘಟಕರೂ ಕೂಡ ವಂಚನೆಗೆ ಒಳಗಾಗುತ್ತಾರೆ. ನಮ್ಮ ಮನೆಯಲ್ಲಿ ಮಾಡಿದ ಅಡುಗೆ ಇನ್ನೊಂದು ಮನೆಯಲ್ಲಿ ಸಂತರ್ಪಣೆಯಾಗುವುದಿದ್ದರೆ ಯಾರಿಗೆ ದುಃಖವಾಗುವುದಿಲ್ಲ ಹೇಳಿ? ಹಾಗಾಗಿ ಗಾಯಕ ಹೊಟ್ಟೆಪಾಡಿಗೆ ಎಷ್ಟು ಬೇಕೋ ಅಷ್ಟನ್ನೇ ಹಾಡುತ್ತಾನೆ ಹೊರತು ಆತ್ಮತೃಪ್ತಿಗೆ ಹಾಡುವುದಿಲ್ಲ. ಇಷ್ಟಾದರೂ ಕಲಾವಿದ ಹಕ್ಕು ಸ್ವಾಮ್ಯದ ಬಗ್ಗೆ ಮಾತನಾಡುತ್ತಾನೆ ಎಂದಾದರೆ ಆತ ಅಪರಾಧಿ ಮಾತ್ರವಲ್ಲ ಕಲೆಗೆ ವಿರೋಧಿಯಾಗಿ ಚಿತ್ರಿಸಲ್ಪಡುತ್ತಾನೆ. ಇದಕ್ಕೆ ಕಾರಣ ಕಲೆಯ ಮೇಲಿನ ಕುರುಡು ಅಭಿಮಾನ ಮತ್ತೇನೂ ಅಲ್ಲ.

ಯಕ್ಷಗಾನ ಕಾರ್ಯಕ್ರಮವಾಗುತ್ತದೆ. ಸಂಘಟಕ ಅದೆಷ್ಟೊ ಶ್ರಮವಹಿಸಿ ಕಾರ್ಯಕ್ರಮ ರೂಪಿಸಿಬಿಡುತ್ತಾನೆ. ಅಷ್ಟರಲ್ಲಿ ಆತ ಅನುಭವಿಸುವ ಮಾನಸಿಕ ಒತ್ತಡ ದೈಹಿಕ ಶ್ರಮ ಉದ್ದೇಶ ಯಾವುದೇ ಆಗಿರಲಿ ಅಲ್ಲಿ ಆತ ಮಾಡುತ್ತಿರುವ ಕ್ರಿಯೆಯ ಪ್ರಧಾನ. ಇಂದು ಯಕ್ಷಗಾನದಂತಹ ಕಾರ್ಯಕ್ರಮದಲ್ಲಿ ಒಳ ಹೊರಗಿನ ರಾಜಕೀಯವೇ ಬಹಳಷ್ಟು ಒತ್ತಡಕ್ಕೆ ಕಾರಣವಾಗುತ್ತದೆ. ಬರಬೇಕಾದ ಕಲಾವಿದರೂ ಬೇಕೆಂದೇ ಕೈಕೊಡುವುದು. ಅಥವಾ ಆತನನ್ನು ಹೋಗದಂತೆ ವಶೀಲಿ ಮಾಡುವುದು ಹೀಗೆ ತೊಂದರೆಗಳಿಗೆಲ್ಲ ತಲೆಕೊಟ್ಟು ಆತ ಒಂದು ಕಾರ್ಯಕ್ರಮ ಮಾಡಿದ. ಇಲ್ಲಿ ಆತನ ಪರಿಶ್ರಮದ ಫಲ ಪ್ರಾಪ್ತಿ ಎಷ್ಟೋ ಅದು ಬೇರೆ. ಆದರೆ ಆ ಕಾರ್ಯಕ್ರಮವನ್ನು ಮುದ್ರಿಸಿ ಜಾಲದಲ್ಲಿ ಹರಿಯಬಿಡುವಾಗ ಆತನ ಪರಿಶ್ರಮವನ್ನು ಸ್ಮರಿಸಬೇಕಾಗುತ್ತದೆ. ಆತನಿಂದ ಅದಕ್ಕೆ ಮೌಖಿಕ ಅನುಮತಿಯನ್ನಾದರೂ ಪಡೆಯಬೇಕಾಗುತ್ತದೆ. ಕಲೆಯ ಮೇಲಿನ ಪ್ರೀತಿಯಿಂದ ಅಷ್ಟು ಮಾಡುವುದು ಅನಿವಾರ್ಯ. ಇಲ್ಲಿ ಪ್ರೀತಿ ಅಭಿಮಾನ ಎಂಬುದು ಎರಡು ಕಡೆಯಲ್ಲೂ ಗಮನಾರ್ಹವಾಗಿಬಿಡುತ್ತದೆ. ಇದು ಮೇಲೆ ಹೇಳಿದ ಪ್ರಾಮಾಣಿಕತೆ ಸಂಸ್ಕಾರಕ್ಕೆ ಅನುಗುಣವಾಗಿರುತ್ತದೆ. ಅದರೆ ಇದಕ್ಕೆ ಬದಲಾಗಿ ಮಹದುಪಾಕರ ಮಾಡಿದಂತೆ ಇದರಲ್ಲಿ ಯಾವುದೇ ಹಕ್ಕು ಸ್ವಾಮ್ಯ ಇಲ್ಲ ಎಂದು ಸಾರುವುದು ಬೊಗಸೆಯಲ್ಲಿ ಹಿಡಿದ ನೀರಿನಲ್ಲಿ ತಮ್ಮ ಹಕ್ಕು ಸ್ಥಾಪಿಸಿದಂತೇ ಆಗುತ್ತದೆ.

ಒಂದು ವಸ್ತುವಿನ ಮೌಲ್ಯ ಎಂಬುದು ನಿರ್ಧಾರವಾಗುವುದು ಅದರ ಬೇಡಿಕೆಗೆ ಅನುಸಾರವಾಗಿ. ಇದು ವ್ಯಾವಹಾರಿಕ ಪ್ರಪಂಚದ ನೀತಿ. ನಾವು ಕಷ್ಟ ಪಟ್ಟು ಸಾಧಿಸಿ ಕೊಂಡು ತಂದ ವಸ್ತು ಒಂದರ ಮೌಲ್ಯವನ್ನು ನಾವು ದೊಡ್ಡದಾಗಿ ಭಾವಿಸುವಾಗ ಅದೇ ವಸ್ತು ಹೊರಗೆ ಉಚಿತವಾಗಿ ಬಿಕರಿಯಾಗುವಾಗ ಮೌಲ್ಯಧಾರಣೆ ಮಾಡಿದ ನಮ್ಮ ಮನಸ್ಸಿಗೆ ಹೇಗಾಗಬೇಡ. ಒಂದು ವಸ್ತುವಿನ ಅದರಲ್ಲು ಕಲೆಯ ಮೌಲ್ಯ ಅಧಿಕವಾಗುವುದು ಅದನ್ನು ಗೌರವಿಸುವಲ್ಲಿ ಮಾತ್ರ. ಅದನ್ನು ಗೌರವಿಸುವವನು ಅದಕ್ಕೆ ಮೌಲ್ಯವನ್ನು ಕೊಟ್ಟೇ ಕೊಡುತ್ತಾನೆ. ಅದನ್ನು ವಾಮ ಮಾರ್ಗಾ ವ್ಯವಹಾರಕ್ಕೆ ಆತ ಪ್ರಚೋದಿಸುತ್ತಿದ್ದಾನೆ ಎಂದಾದರೆ ಖಂಡಿತವಾಗಿ ಆತನಿಗೆ ಆ ಕಲೆಯಲ್ಲಿ ಗೌರವ ಇಲ್ಲವೆಂದೇ ಪರಿಗಣಿಸಲ್ಪಡುತ್ತದೆ. ಇದು ಸಾಮಾನ್ಯ ಜ್ಞಾನ. ಅತ್ಯಮೂಲ್ಯ ಪುಸ್ತಕವೊಂದಕ್ಕೆ ಬೇಡಿಕೆ ಇರುವುದನ್ನು ಪರಿಗಣಿಸಿ ಅವಿದ್ಯಾವಂತ ವರ್ತಕ ತನ್ನ ಅಂಗಡಿಯಲ್ಲಿ ಅದನ್ನು ಮಾರಾಟಕ್ಕೆ ಇಡುತ್ತಾನೆ. ಆದರೆ ಅವನಿಗೆ ಅದರ ನಿಜವಾದ ಮೌಲ್ಯ ತಿಳಿದಿರುವುದಿಲ್ಲ ಕೇವಲ ವ್ಯವಹಾರದ ಲಾಭ ನಷ್ಟ ಲೆಕ್ಕಾಚಾರದ ಪರಿಧಿಯ ಮೌಲ್ಯ. ಆದರೆ ಕೊಂಡುಕೊಳ್ಳುವವನಿಗೆ ಮತ್ತು ಅದನ್ನು ಬರೆದು ಪ್ರಕಟಿಸಿದವನಿಗೆ ಅದರ ಮೌಲ್ಯದ ಅರಿವಿರುತ್ತದೆ. ಈ ಎರಡು ಮನೋಭಾವದ ನಡುವೆ ಲಾಭಮಾಡುವ ಸ್ವಾರ್ಥವಷ್ಟೆ ಅಂಗಡಿಯ ವರ್ತಕನಿಗಿರುತ್ತದೆ. ಆದರೆ ಇಲ್ಲಿ ಸ್ವಾರ್ಥದ ರೂಪಗಳು ಹಲವಿದೆ.

ಅನುಮತಿಯಿಲ್ಲದೇ ತೆಗೆದುಕೊಳ್ಳಬಹುದಾದ ವಸ್ತುವಿದ್ದರೆ ಅದು ಉಚ್ಚಿಷ್ಟ ಅಂದರೆ ಎಂಜಲು ಮಾತ್ರ. ಉಂಡು ಎಸೆದ ಎಲೆಯಿಂದ ಅಲೆಮಾರಿ ಹೆಕ್ಕಿ ತಿನ್ನುವಾಗ ಯಾರ ಅನುಮತಿಯನ್ನು ಪಡೆಯುವುದಿಲ್ಲ. ಬದಲಾಗಿ ಸುತ್ತಲಿದ್ದ ಹಂದಿನಾಯಿಗಳೊಂದಿಗೆ ತನ್ನ ಹಕ್ಕಿಗಾಗಿ ಹೊರಾಡಬೇಕಾಗುತ್ತದೆ. ವಿಚಿತ್ರವೆಂದರೆ ಇಂದು ಎಂಜಲೆಲೆಯಲ್ಲೂ ಹಕ್ಕು ಸ್ಥಾಪಿಸಲ್ಪಡುವುದನ್ನು ಕಾಣಬಹುದು. ಅದಕ್ಕೆ ಛತ್ರದ ಅಥವ ಹೋಟೆಲಿನ ಹಿಂಬಾಗಿಲ ದರ್ಶನವನ್ನು ಮಾಡಬೇಕು. ಇಷ್ಟಿದ್ದರೂ ಇಂದು ಹಕ್ಕು ಸ್ವಾಮ್ಯದ ಬಗ್ಗೆ ಹೇಳುವಾಗ ಆತನನ್ನು ಸಮಾಜ ವಿರೋಧಿಯಂತೆ ಕಾಣಲಾಗುತ್ತದೆ. ಕಲೆಗೆ ಮಾರಕನೆಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಇದು ಮೇಲೆ ಹೇಳಿದ ಉನ್ನತ ಸಂಸ್ಕಾರವನ್ನು ಹೀಯಾಳಿಸಿದಂತೆ ಅಲ್ಲವೇ?

ಕಲೆಯ ಮೇಲೆ ಅಭಿಮಾನ ಇರಬೇಕು. ಆದರೆ ಅದು ಮತ್ತೊಬ್ಬನ ಶ್ರಮದ ಮೇಲೆ ಕಟ್ಟುವ ಗೋರಿಯಾಗಕೂಡದು.



ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ